ಸಹಕಾರ ಸಂಘಗಳ ಸದಸ್ಯರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಸುಸ್ವಾಗತ. ರಾಜ್ಯದ ಎಲ್ಲಾ ಸಹಕಾರಿಗಳ ಮತ್ತು ರೈತರ ನಿರಂತರ ಒತ್ತಾಯ ಹಾಗೂ ಬೇಡಿಕೆ ಪರಿಗಣಿಸಿ ಈ ಹಿಂದೆ 2018ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿಗೊಳಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿ, 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಣೆ ಮಾಡಿದೆ.
ಯೋಜನೆ ಜಾರಿಗಾಗಿ “ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್”ಅನ್ನು ರಚಿಸಿದ್ದು, ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮಹಾ ಪೋಷಕರಾಗಿ, ಸಹಕಾರ ಸಚಿವರು ಪೋಷಕರಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಇವರು ಟ್ರಸ್ಟ್ನ ಅಧ್ಯಕ್ಷರಾಗಿರುತ್ತಾರೆ. ಸಹಕಾರ ಸಂಘಗಳ ನಿಬಂಧಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ವೈದ್ಯಕೀಯ ಕ್ಷೇತ್ರದ ನುರಿತ ವೈದ್ಯಕೀಯ ತಜ್ಞರು ಹಾಗೂ ಇಬ್ಬರು ಹಿರಿಯ ಸಹಕಾರಿಗಳು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಿಂದ ತಲಾ ಒಬ್ಬರು ಟ್ರಸ್ಟ್ನ ಸದಸ್ಯರಾಗಿರುತ್ತಾರೆ.
ರಾಜ್ಯದಲ್ಲಿನ ಯಾವುದೇ ಸಹಕಾರ ಸಂಘದ (ಗ್ರಾಮೀಣ ಮತ್ತು ನಗರ) ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, (ಸಹಕಾರ ಸಂಸ್ಥೆಗಳಿಂದ ರಚಿತವಾಗಿರುವ) ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರು ಸಹಕಾರಿ ಸದಸ್ಯರಾಗಿ ಮೂರು ತಿಂಗಳು ಗತಿಸಿದ್ದಲ್ಲಿ ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯಾವುದೇ ವಯೋಮಿತಿ ನಿರ್ಬಂಧ ಇಲ್ಲದೇ ಯಶಸ್ವಿನಿ ಯೋಜನೆಯ ಸದಸ್ಯರಾಗಬಹುದಾಗಿದೆ. ಪ್ರಧಾನ ಅರ್ಜಿದಾರರ ಅರ್ಹಕುಟುಂಬದ ಸದಸ್ಯರು ಸಹ ನಿಗದಿತ ವಂತಿಗೆ ಪಾವತಿಸಿ ಯಶಸ್ವಿನಿ ಯೋಜನೆಯ ಸದಸ್ಯರಾಗಲು ಅವಕಾಶ ಕಲ್ಪಿಸಿದೆ. ಅವಲಂಬಿತ ಕುಟುಂಬದ ಸದಸ್ಯರು ಸಹಕಾರ ಸಂಘದ ಸದಸ್ಯರಾಗಬೆಕಾಗಿಲ್ಲ.
“ಕುಟುಂಬ” ಎಂದರೆ ಪ್ರಧಾನ ಅರ್ಜಿದಾರರ ತಂದೆ/ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೂಸೆಯಂದಿರು ಮತ್ತು ಮೊಮ್ಮಕ್ಕಳು ಎಂದು ಅರ್ಥೈಯಿಸುವುದು.
ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ ರೂ.5.00/- ಲಕ್ಷಕ್ಕೆ ನಿಗದಿಪಡಿಸಿದೆ.
ನೋಂದಾಯಿತ ಸದಸ್ಯರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡ್ನ್ನು ಒದಗಿಸಲಾಗುತ್ತಿದ್ದು, ಅದನ್ನು ಬಳಸಿ, ಯೋಜನೆಯಡಿ ಗುರುತಿಸಿದ ನೆಟ್ವರ್ಕ್ ಆಸ್ಪತ್ರೆಗಳಲ್ಲಿ (ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅಳವಡಿಸಿಕೊಂಡಿರುವ) 1650 ಚಿಕಿತ್ಸೆಗಳು ಮತ್ತು 478 ಐಸಿಯು ಸೇರಿ ಒಟ್ಟು 2128 ಚಿಕಿತ್ಸ್ಸೆಗಳನ್ನು ನಗದುರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆ ಇತ್ಯಾದಿ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.
30.00 ಲಕ್ಷ ಸದಸ್ಯರ ನೊಂದಣೆ ಗುರಿಗೆ ಎದುರಾಗಿ ಮಾರ್ಚ್ 2023ರ ಅಂತ್ಯಕ್ಕೆ ಗುರಿ ಮೀರಿ 47.00 ಲಕ್ಷಕ್ಕೂ ಹೆಚ್ಚಿನ ಸದಸ್ಯರು ಯೋಜನೆಯಡಿ ನೊಂದಣಿ ಮಾಡಿಕೊಂಡಿರುವುದು ಈ ಯೋಜನೆಗೆ ಇರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ದಿನಾಂಕ: 01-01-2023 ರಿಂದ ಚಿಕಿತ್ಸೆಗಳನ್ನು ಪ್ರಾರಂಭಿಸಿದ್ದು ದಿನಾಂಕ: 10-03-2024 ರವರೆಗೆ ಸುಮಾರು 63,691 ಫಲಾನುಭವಿಗಳು ಸುಮಾರು ರೂ.103.00 ಕೋಟಿ ಮೊತ್ತದ ಚಿಕಿತ್ಸೆಗಳನ್ನು ರಾಜ್ಯಾದ್ಯಂತ ಯಶಸ್ವಿನಿ ನೆಟ್ವರ್ಕ್ ಆಸತ್ರೆಗಳಲ್ಲಿ ಪಡೆದಿರುತ್ತಾರೆ.